ಜಿಲ್ಲಾ ನಾಗರೀಕ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಚಿಕ್ಕಬಳ್ಳಾಪುರ
ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳನ್ನು ಚರ್ಚಿಸಲು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತೆ ಜಿಲ್ಲಾ ನಾಗರೀಕ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಹಾಳಾಗಿರುವ ಸರ್ವಿಸ್ ರಸ್ತೆಗಳನ್ನು ಮತ್ತು ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಾಗಿ ಉಂಟಾಗುತ್ತಿರುವ ರಸ್ತೆ ಅಪಘಾತಗಳನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳ ಸಭೆ ನಡೆಸುವಂತೆ ತಿಳಿಸಿದ್ದಾರೆ.
ಅಲ್ಲದೇ ರಾ.ಹೆ 44 ರ ಹೆದ್ದಾರಿಯು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾದುಹೋಗಿರುವುದು ಹೆಮ್ಮೆಯ ವಿಷಯವಾಗಿದೆ. ಹೆದ್ದಾರಿಗೆ ಎರಡೂ ಕಡೆ ಆನುಕೂಲಕರ ವೈಜ್ಞಾನಿಕ ಸೇವಾ ರಸ್ತೆಗಳಿಲ್ಲದೆ ಅನೇಕ ಅಪಘಾತಗಳು ಸಂಭವಿಸಿ ಅಮಾಯಕ ಜೀವಗಳು ಬಲಿಯಾಗುತ್ತಿದ್ದು, ಇದರಿಂದ ಅವಲಂಬಿತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿ ಬೀದಿಗೆ ಬಿದ್ದಿವೆ.
ಸೇವಾ ರಸ್ತೆಗಳ ಅವೈಜ್ಞಾನಿಕ ನಿರ್ಮಾಣ, ಅವಶ್ಯಕತೆಗೆ ಅನುಗುಣವಾಗಿ ಸೇವಾ ರಸ್ತೆಗಳ ಅಲಭ್ಯತೆಯಿಂದ ದಿನನಿತ್ಯ ಸಂಚರಿಸುವ ರೈತರು. ನಾಗರೀಕರು ಹಾಗೂ ವಿದ್ಯಾರ್ಥಿಗಳು ತೀವ್ರ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈಗಾಗಲೆ ಹಲವಾರು ಬಾರಿ ಮನವಿ ಪತ್ರಗಳನ್ನು ನೀಡಿದ್ದರೂ ಸಹ ಯಾವುದೇ ಸ್ಪಂದನೆ ಇಲ್ಲದಿರುವುದು ದುರದೃಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಚದಲಪುರ ಕ್ರಾಸ್ ಸೇರಿದಂತೆ ಕೆಲವು ಕಡೆ ಅವೈಜ್ಞಾನಿಕ ಮೇಲು ಸೇತುವೆಗಳ ನಿರ್ಮಾಣ ಮಾಡಲಾಗುತ್ತಿದ್ದು. ಮುಂದಿನ ದಿನಗಳಲ್ಲಿ ಈ ಸ್ಥಳಗಳಲ್ಲಿ ತೀವ್ರ ಅಪಘಾತಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿ ಉಂಟಾಗಿದೆ. ಆದ್ದರಿಂದಾಗಿ, ಸ್ಥಳೀಯ ಜನ ಪ್ರತಿನಿಧಿಗಳು ಮತ್ತು ನಾಗರಿಕರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ತಮ್ಮ ಅಧ್ಯಕ್ಷತೆಯಲ್ಲಿ ಮತ್ತು ಹೆದ್ದಾರಿ ಪ್ರಾಧಿಕಾರದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಾವುಗಳು ಒಂದು ಸಭೆಯನ್ನು ವ್ಯವಸ್ಥೆಗೊಳಿಸಿ ಜಿಲ್ಲೆಯ ನಾಗರಿಕರಿಗೆ ಅನುಕೂಲ ಕಲ್ಪಿಸಿ ಅಮಯಾಕರ ಜೀವಗಳನ್ನು ಉಳಿಸಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಮಾತನಾಡಿ, ಸರ್ವೀಸ್ ರಸ್ತೆಗಳ ಸಮಸ್ಯೆಯು ಗಮನಕ್ಕೆ ಬಂದಿದ್ದು, ಶೀಘ್ರದಲ್ಲೇ ಸಭೆ ಕರೆದು ಸಮಸ್ಯೆಗಳನ್ನುಗಳನ್ನು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಯಲುವಹಳ್ಳಿಸೊಣ್ಣೇಗೌಡ, ಮಳ್ಳೂರು ಶಿವಣ್ಣ, ಮೇಲೂರು ಅಮರ್, ಕೆ.ಎಂ.ರೆಡ್ಡಪ್ಪ, ಸಿ.ಎನ್.ಮಂಜುನಾಥ್, ರವಿ, ಶಾಂತಮೂರ್ತಿ ಮತ್ತಿತರರು ಇದ್ದರು.