ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ವಿರುದ್ಧ ಸಂಸದ ಡಾ.ಕೆ.ಸುಧಕರ್ ಕಿಡಿ
ಚಿಕ್ಕಬಳ್ಳಾಪುರ
ಕೆಟ್ಟ ಮನಸ್ಥಿತಿಯುಳ್ಳ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಜತೆ ಇನ್ಮುಂದೆ ಯಾವುದೇ ಸರಕಾರಿ ಅಧಿಕೃತ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಬಿಜೆಪಿ ಮುಖಂಡ ನವೀನ್ ಕಿರಣ್ ಹುಟ್ಟುಹಬ್ಬಕ್ಕೆ ಹಾಜರಾಗಿ ಶುಭ ಹಾರೈಸಿ ಮಾತನಾಡಿದ ಅವರು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಉಸ್ತುವಾರಿ ಸಚಿವ ಸುಧಾಕರ್ ಅವರು ನನ್ನ ನೇತೃತ್ವದಲ್ಲಿ ಆಗಿದ್ದ ಕಾಮಗಾರಿಗಳನ್ನು ಉದ್ಘಾಟಿಸಿ ಹೋಗಿದ್ದಾರೆ. ನಾನು ಸಚಿವನಾಗಿದ್ದ ವೇಳೆ ಎಷ್ಟೆಲ್ಲ ಕೆಲಸಗಳು ಮಾಡಿದ್ದೇನೆ ಎಂಬುದನ್ನು ನೋಡಲಿ. ನನಗೆ ಆಹ್ವಾನ ಇರಲಿ ಇಲ್ಲದೇ ಹೋಗಲು ನನ್ನ ಕ್ಷೇತ್ರದ ಜನರಿಗೆ ಅನುಕೂಲ ಸಿಕ್ಕರೆ ಸಾಕು. ಇಂಥ ಕೆಟ್ಟ ಮನಸ್ಥಿತಿಯುಳ್ಳ ಜಿಲ್ಲಾ ಉಸ್ತುವಾರಿ ಸಚಿವ ಜತೆ ಇನ್ನೆಂದಿಗೂ ಅಧಿಕೃತ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಳ್ಳಲ್ಲ ಎಂದು ಹೇಳಿದರು.
ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಅಭಿವೃದ್ಧಿ ಕಾಮಗಾರಿ ಗಳಿಗೆ ನಾನು ಸಚಿವನಾಗಿದ್ದ ವೇಳೆ ಚಾಲನೆ ನೀಡಲಾಗಿತ್ತು ಆದರೆ ಇಂದು ಅವರೇ ಮಾಡಿರುವಂತೆ ಚಾಲನೆ ನೀಡಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಸ್ಥಳೀಯ ಮುಖಂಡರ ಜತೆ ತೆರಳಿ ಸೌಲಭ್ಯಗಳ ಪರಿಶೀಲನೆ ನಡೆಸಲಿದ್ದೇನೆ. ಚಿಂತಾಮಣಿಯ ಮುರುಗಮಲ್ಲದಲ್ಲೂ ಇಡೀ ರಾಜ್ಯದಲ್ಲೇ ಮಾದರಿಯಾಗುವಂತೆ ಮೆದುಳು ಆರೋಗ್ಯ ಕುರಿತು ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದ್ದಾರೆ ಎಂದರು.
ನಾನು ಸಚಿವನಾಗಿದ್ದ ವೇಳೆ ನಂದಿ ಗ್ರಾಮ ಸೇರಿದಂತೆ ಹಲವೆಡೆ ಆಸ್ಪತ್ರೆಗಳ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಆ ಎಲ್ಲ ಕಾಮಗಾರಿಗಳ ಉದ್ಘಾಟನೆಯನ್ನು ಮಾಡಿದ್ದಾರೆ. ನಾನು ಏನು ಕೆಲಸ ಕಾರ್ಯಗಳನ್ನು ಮಾಡಿದ್ದೇನೆಂದು ಕಣ್ಣು ಬಿಟ್ಟು ಸಚಿವರು ನೋಡಲಿ. ಇಂತಹ ಕೆಟ್ಟ ಮನಸ್ಥಿತಿ ಇರುವವರ ಜತೆ ಇನ್ಮುಂದೆ ವೇದಿಕೆ ಹಂಚಿಕೊಳ್ಳದಿರಲು ನಿರ್ಧರಿಸಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಂಬAಧಿಸಿದ ಕೆಲಸಗಳನ್ನು ನಾನು ಮಾಡಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.
ನವೀನ್ಕಿರಣ್ ಅವರು ಸೋಲು ಗೆಲುವಿನಲ್ಲಿ ಜತೆಯಾಗಿ ನಿಂತಿದ್ದಾರೆ. ಗೆಲುವಿನಲ್ಲಿ ಅಲ್ಲ ಸೋಲಿನಲ್ಲೂ ಅವರ ನನ್ನ ಜತೆ ನಿಂತು ಬೆಂಬಲ ಕೊಟ್ಟಿದ್ದಾರೆ. ಇಂತಹ ವ್ಯಕ್ತಿತ್ವದಿಂದಲೇ ಅವರು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ ಎಂದರು.