ಎಂಎಲ್ಎ ಪ್ರದೀಪ್ ಈಶ್ವರ್ ಸ್ಕಾಲರ್ಶಿಪ್ 2024 ಯೋಜನೆ ಘೋಷಿಸಿದ ಶಾಸಕ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಸರಕಾರಿ, ಖಾಸಗಿ ಶಾಲೆ-ಕಾಲೇಜುಗಳಲ್ಲಿವ್ಯಾಸಂಗ ಮಾಡುತ್ತಿರುವ ಎಸ್ಸೆಸ್ಸೆಲ್ಸಿ, ಅಂತಿಮ ವರ್ಷದ ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಎಂಎಲ್ಎ ಪ್ರದೀಪ್ ಈಶ್ವರ್ ಸ್ಕಾಲರ್ಶಿಪ್ 2024 ಯೋಜನೆಯಡಿ ಸ್ಕಾಲರ್ಶಿಪ್ ನೀಡಲು ನಿರ್ಧರಿಸಲಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಘೋಷಣೆ ಮಾಡಿದರು.
ನಗರದ ಗೃಹ ಕಚೇರಿಯಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಅಕ್ಟೋಬರ್ 15 ರಿಂದ ನವೆಂಬರ್ 15ರ ವರೆಗೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗಲಿದೆ. ಇದಕ್ಕಾಗಿ 5 ಕೋಟಿ ಖರ್ಚು ಬರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಅದೆಷ್ಟೇ ಕೋಟಿಯಾದರೂ ಇನ್ನೂ 4 ವರ್ಷ ಈ ಸ್ಕಾಲರ್ ಶಿಪ್ ನೀಡುತ್ತೇನೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಸ್ಸೆಸ್ಸೆಲ್ಸಿ, ದ್ವೀತಿಯ ಪಿಯುಸಿ, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು, ಅಂತಿಮ ವರ್ಷದ ಪಿಜಿ ಹಾಗೂ ಐಟಿಐ ಸೇರಿದಂತೆ ಡಿಪ್ಲೋಮಾ, ಎಂಬಿಬಿಎಸ್, ಇಂಜಿನಿಯರಿಂಗ್, ಬಿಎಡ್ ಎಲ್ಲಾ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತಲಾ 1,000 ರೂ., ಡಿಪ್ಲೊಮಾ-ಐಟಿಐ ವಿದ್ಯಾರ್ಥಿಗಳಿಗೆ 1,500 ರೂ., ಪದವಿ ಹಾಗೂ ಪಿಜಿ ವಿದ್ಯಾರ್ಥಿಗಳಿಗೆ 3,000 ರೂ. ವಿದ್ಯಾರ್ಥಿವೇತನ ನೀಡಲು ತೀರ್ಮಾನಿಸಲಾಗಿದೆ. ಕಳೆದ ವರ್ಷ ಸರಕಾರಿ ಶಾಲಾ – ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿ ವೇತನ ವಿತರಿಸಿದ್ದೆ. ಆದರೆ ಕೆಲವು ಖಾಸಗಿ ಶಾಲೆ – ಕಾಲೇಜಿನ ವಿದ್ಯಾರ್ಥಿಗಳು ನಮಗೂ ಕೊಡಿ ಎಂದು ಕೇಳಿದ್ದರು. ಅಲ್ಲದೇ ಆಗ ನಮ್ಮ ಕ್ಷೇತ್ರದವರಲ್ಲದವರಿಗೂ ಸ್ಕಾಲರ್ ಶಿಪ್ ನೀಡುವಂತಾಗಿತ್ತು. ಹೀಗಾಗಿ ಈ ಬಾರಿ ನಮ್ಮ ಕ್ಷೇತ್ರದವರು ಎಲ್ಲೇ ಓದುತ್ತಿದ್ದರೂ ಆನ್ಲೈನ್ನಲ್ಲಿನೋಂದಣಿ ಮಾಡಿಕೊಂಡರೆ ಅವರಿಗೆ ಸ್ಕಾಲರ್ಶಿಪ್ ನೀಡುವ ವ್ಯವಸ್ಥೆ ಮಾಡಿದ್ದೇನೆ ಎಂದು ತಿಳಿಸಿದರು.
ಹೀಗಾಗಿ ಕ್ಷೇತ್ರದ ವಿದ್ಯಾರ್ಥಿಗಳು ಎಂಎಲ್ಎ ಪ್ರದೀಪ್ ಈಶ್ವರ್ ವೆಬ್ಸೈಟ್ನಲ್ಲಿತಮ್ಮ ಹೆಸರನ್ನ ನೊಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಕ್ಯೂಆರ್ ಕೋಡ್ ನೀಡಲಾಗಿದ್ದು, ಸ್ಕ್ಯಾನ್ ಮಾಡಿದರೆ ಅರ್ಜಿ ಸಿಗಲಿದ್ದು, ಆನ್ಲೈನ್ನಲ್ಲಿನೋಂದಣಿ ಮಾಡಬಹುದು. ಆಧಾರ್ ಕಾರ್ಡ್ ಮತ್ತು ಕಾಲೇಜಿನ ಐಡಿ ಇದ್ದರೆ ಸಾಕು. ಮುಖತಃ ಭೇಟಿಯಾಗಿ ಯಾವುದೇ ದಾಖಲೆ ಪ್ರತಿ ನೀಡುವ ಅವಶ್ಯಕತೆ ಇಲ್ಲಎಂದು ಹೇಳಿದರು.
ನಾನು ಕೊಡುತ್ತಿರುವ ಸ್ಕಾಲರ್ ಶಿಪ್ ಮೊತ್ತ ಸಾಕಷ್ಟು ಮಂದಿಗೆ ದೊಡ್ಡದು. ಎಷ್ಟೋ ವಿದ್ಯಾರ್ಥಿಗಳು ನನಗೆ ಗೈಡ್ಗಳನ್ನು ಕೊಡಿಸಿ ಎಂದು ಕೇಳಿದ್ದಾರೆ. ಹೀಗಾಗಿ ಶೈಕ್ಷಣಿಕ ಉದ್ದೇಶಕ್ಕಾಗಿ ನಾನು ಕೊಡುವ ಸ್ಕಾಲರ್ ಶಿಪ್ ಅನುಕೂಲವಾದರೆ ಸಾಕು. ನನಗೆ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಎನ್ನುವ ಸಂತೋಷಕ್ಕಿಂತ ಬಡವರ ಮಕ್ಕಳ ಮೊಗದಲ್ಲಿಸಂತೋಷವನ್ನು ನೋಡವುದೇ ನನಗೆ ಖುಷಿ ಎಂದು ಹೇಳಿದರು.
ವರಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಸೀರೆ, ಅರಿಶಿಣ ಕುಂಕುಮ, ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಬಟ್ಟೆ, ಅಂಗನವಾಡಿ ಮಕ್ಕಳಿಗೆ ಬಟ್ಟೆಯನ್ನು ಕೊಡುತ್ತಿದ್ದು, ಇದು ನನ್ನ ಗೆಲ್ಲಿಸಿರುವುದಕ್ಕೆ ಕೊಡುತ್ತಿರುವ ಕೊಡುಗೆ. ಇದೆಲ್ಲವೂ ನನ್ನ ಸ್ವಂತ ಶ್ರಮದ ಹಣ. ಅವಕಾಶ ಸಿಕ್ಕಿದೆ ಎಲ್ಲರಿಗೂ ಹಂಚುವ ಕೆಲಸ ಮಾಡುತ್ತೇನೆ. ನಾನು 20-30 ವರ್ಷ ಶಾಸಕನಾಗಿ ಇರಬೇಕೆಂಬ ಉದ್ದೇಶದಿಂದ ಇದನ್ನೆಲ್ಲಮಾಡುತ್ತಿಲ್ಲ. ನನ್ನ ಗೆಲ್ಲಿಸಿರುವ ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಸ್ಕಾಲರ್ ಶಿಪ್ ಯೋಜನೆ ಸಂಬಂಧ ಎಲ್ಲರ ಮನೆಗಳಿಗೂ ಕರಪತ್ರಗಳನ್ನು ಹಂಚುತ್ತೇನೆ. ಬ್ಯಾನರ್, ಫ್ಲೆಕ್ಸ್ಗಳನು ಹಾಕಿಸುತ್ತಿದ್ದೇನೆ. ಕ್ಷೇತ್ರದ ಪ್ರತಿಯೊಬ್ಬ ವಿದ್ಯಾರ್ಥಿಗೂ ಇದರ ನೆರವು ಸಿಗುವಂತೆ ಮಾಡುತ್ತೇನೆ. ಎಲ್ಲವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸ್ಕಾಲರ್ಶಿಪ್ನ್ನು ಕಾರ್ಯಕ್ರಮದ ಮೂಲಕವೋ ಇಲ್ಲಬೇರೆಗೆ ವಿಧಾನ ಹೇಗೆ ಎಂಬುದನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.
ನಗರದ ಶಾಸಕ ಗೃಹ ಕಚೇರಿಯಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದ ಶಾಸಕ ಪ್ರದೀಪ್ ಈಶ್ವರ್